ವಿಶ್ವಕೋಶ
	ಜ್ಞಾನದ ವಿವಿಧ ಶಾಖೆಗಳ ಬಗೆಗಿನ ಮಾಹಿತಿಗಳನ್ನು ಸಂಪಾದಿಸಿ, ಸಂಸ್ಕರಿಸಿ, ಬಿಡಿಲೇಖನಗಳನ್ನು ಅಕಾರಾದಿಯಾಗಿ ಅಳವಡಿಸಿರುವ ಪರಾಮರ್ಶನ ಗ್ರಂಥ (ಎನ್‍ಸೈಕ್ಲೊಪೀಡಿಯ). ಎನ್‍ಸೈಕ್ಲೊಪೀಡಿಯ ಎಂಬ ಪದ ಗ್ರೀಕ್ ಮೂಲದ್ದು. ಇದರ ಅರ್ಥ “ಸಂಪೂರ್ಣ ಶಿಕ್ಷಣ.” ಸೈಕ್ಲೊಪೀಡಿಯ ಎಂಬ ಪದವೂ ಇದೇ ಅರ್ಥದಲ್ಲಿ ಬಳಕೆಯಲ್ಲಿದೆ. ಈ ಪದ 1700ರ ಅನಂತರ ಬಳಕೆಗೆ ಬಂತು. ಮಾಹಿತಿಗಳು ಒಂದು ವಿಷಯಕ್ಕೆ ಸೀಮಿತವಾಗಿದ್ದರೆ ಅದು ವಿಷಯ ವಿಶ್ವಕೋಶವೆನಿಸುತ್ತದೆ, ಎಲ್ಲ ವಿಷಯಗಳನ್ನೂ ಒಳಗೊಂಡಿದ್ದರೆ ಸಾಮಾನ್ಯ ವಿಶ್ವಕೋಶವೆನಿಸುತ್ತದೆ. ಹಿಂದೆ ವಿದ್ವಾಂಸರು ತಮಗೆ ಬೇಕಾದ ಮಾಹಿತಿಗಳ್ನು ಅಲ್ಲಿ ಇಲ್ಲಿ ಹಂಚಿ ಹರಡಿಹೋಗಿದ್ದ ಹಸ್ತಪ್ರತಿಗಳು, ತಾಳೆಯ ಸುರುಳಿಗಳು ಮುಂತಾದವುಗಳಿಂದ ಹುಡುಕಿ ತೆಗೆಯುತ್ತಿದ್ದರು. ಕೆಲವರು ಪ್ರಪಂಚದ ಇತರ ಭಾಗಗಳಲ್ಲಿ ನಡೆದ ಅಧ್ಯಯನಗಳ ಮಾಹಿತಿ ಆಧಾರದ ಮೇಲೆ ವಿಷಯವನ್ನು ಸಂಗ್ರಹಿಸುತ್ತಿದ್ದರು. ಮತ್ತೆ ಕೆಲವರು ಸಂಶೋಧನೆಗಳನ್ನೂ ಕ್ಷೇತ್ರಾಧ್ಯಯನಗಳನ್ನೂ ನಡೆಸಿ ವಿಷಯನಿರೂಪಣೆ ಮಾಡುತ್ತಿದ್ದರು. ಈ ಎಲ್ಲವೂ ವಿಶ್ವಕೋಶದ ಮೂಲ ರೂಪಗಳು ಅಥವಾ ಪ್ರಾಚೀನರೂಪಗಳು. ಆದರೆ ಆಧುನಿಕ ವಿಶ್ವಕೋಶ ದಿಂದ ಅವು ಹಲವು ರೀತಿ ಭಿನ್ನವಾಗಿವೆ. ಪ್ರಾಚೀನ ವಿದ್ವಾಂಸರು ಮಾಹಿತಿಗಳನ್ನು ಜೋಡಿಸುತ್ತಿದ್ದ ಕ್ರಮ ಅವರಿಗಿಷ್ಟಬಂದಂತೆ ಇರುತ್ತಿದ್ದುದಲ್ಲದೆ  ನಿಖರತೆಯನ್ನು ಪರಿಶೀಲಿಸುವ ಮಾರ್ಗಗಳೂ ಸೀಮಿತವಾಗಿದ್ದುವು. ಜೊತೆಗೆ ಅವರ ಓದುಗರ ಚೌಕಟ್ಟೂ ಸೀಮಿತವಾಗಿರುತ್ತಿತ್ತು. ವಿಶ್ವಕೋಶಗಳು ಹಾಗಲ್ಲ. ಇಲ್ಲಿ ಲೇಖನಗಳು yಹಾಗೂ ಮಾಹಿತಿಗಳು ನಿರ್ದುಷ್ಟವೂ ಸ್ಪಷ್ಟವೂ ನಿಖರವೂ ಆಗಿದ್ದು ಕ್ರಮಬದ್ಧ ಜೋಡಣೆಗೆ ಒಳಪಟ್ಟಿರುತ್ತವೆ. ಅವುಗಳ ಓದುಗರ ಸಂಖ್ಯೆಯೂ ಅಪರಿಮಿತವಾದದ್ದು. 

	ಪ್ರಪಂಚದಲ್ಲಿ ವಿಶ್ವಕೋಶಗಳ ರಚನೆ ಸು. 1700ರಿಂದೀಚೆಗೆ ಆರಂಭವಾಯಿತು. ವಿಶ್ವಕೋಶಕ್ಕೆ ಮಾಹಿತಿಯನ್ನು ಯಾರು, ಯಾವಾಗ, ಏನು, ಎಲ್ಲಿ, ಹೇಗೆ ಮತ್ತು ಏಕೆ ಎಂಬ ಆರು ಪ್ರಶ್ನೆಗಳ ಆಧಾರದ ಮೇಲೆ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆ ರೇಡಾರ್ ಎಂಬ ಪದ ಕುರಿತಂತೆ ರೇಡಾರ್ ಎಂದರೇನು, ಯಾರು, ಎಂದು ಶೋಧಿಸಿದ್ದು, ಎಲ್ಲಿ ಮತ್ತು ಹೇಗೆ, ಈ ಸಮಸ್ಯೆ ಏಕೆ ಎದುರಾಯಿತು ಮುಂತಾದ ಪ್ರಶ್ನೆಗಳಿಗೆ ಸಾಕಷ್ಟು ವಿವರಣೆ ನೀಡಬೇಕು.		 (ನೋಡಿ- ರೇಡಾರ್)

	ವಿಶ್ವಕೋಶವನ್ನು ಯಾರೇ ಒಬ್ಬರು ಸಿದ್ಧಪಡಿಸಲಾಗುವುದಿಲ್ಲ. ಯಾವುದಾದರೂ ಒಂದು ನಿರ್ದಿಷ್ಟ ಸಂಸ್ಥೆ ನಿರ್ದಿಷ್ಟ ವಿಷಯಗಳನ್ನು ಕುರಿತು ಮಾಹಿತಿ ಕಲೆಹಾಕಲು, ಅದರ ಕುರಿತು ಚಿಂತಿಸಿ ಬರೆಯಲು ಲೇಖಕರನ್ನು, ವಿದ್ವಾಂಸರನ್ನು, ವಿಷಯ ತಜ್ಞರನ್ನು, ಶಿಕ್ಷಣ ತಜ್ಞರನ್ನು ಮತ್ತು ಸಂಪಾದಕರನ್ನು ಆಹ್ವಾನಿಸುತ್ತದೆ. ಸಂಶೋಧಕರನ್ನು, ಗ್ರಂಥಾಧಿಕಾರಿಗಳನ್ನು, ಕಲೆಗಾರರನ್ನು, ಚಿತ್ರಕಾರರನ್ನು, ಭೂಪಟ ತಯಾರಕರನ್ನು, ಪ್ರಕಾಶಕರನ್ನು ಬಳಸಿಕೊಳ್ಳುತ್ತದೆ. ಮುದ್ರಣ, ಪ್ರಕಟಣೆ, ಮಾರಾಟದ ಏರ್ಪಾಡು ಮುಂತಾದವನ್ನು ಪ್ರತ್ಯೇಕವಾಗಿ ಕೈಗೊಳ್ಳಬೇಕಾಗುತ್ತದೆ. ಪ್ರಪಂಚದ ಮಾಹಿತಿಕೋಶಗಳ ಚರಿತ್ರೆಯನ್ನು ಗಮನಿಸಿದರೆ, ಸು. 1980ರ ಮಧ್ಯಭಾಗದವರೆಗೆ ವಿಶ್ವಕೋಶಗಳು ತಯಾರಾಗುತ್ತಿದ್ದುದು ಗ್ರಂಥಗಳ ರೂಪದಲ್ಲೇ. ಅನಂತರವೇ ಅದು ವಿದ್ಯುನ್ಮಾನ ಮಾಧ್ಯಮಗಳ ಸಾಲಿಗೆ ಸೇರಿ ವೀಡಿಯೊಪರದೆಯ ಮೇಲೆ ಮೂಡಲಾರಂಭಿಸಿದ್ದು. 

	ಇತಿಹಾಸ: ಪ್ರಾಚೀನ ಗ್ರೀಕ್‍ತತ್ತ್ವಜ್ಞಾನಿ ಅರಿಸ್ಟಾಟಲ್ ಮೊತ್ತಮೊದಲ ವಿಶ್ವಕೋಶ ರಚನಕಾರ (ಕ್ರಿ.ಪೂ. 384-322) ಎಂಬುದು ವಿದ್ವಾಂಸರ ಅಭಿಪ್ರಾಯ. ಪ್ರಪಂಚದ ಅನೇಕ ರೋಮಾಂಚಕಾರಿ ವಿಷಯಗಳನ್ನು ಹಲವು ಸಂಚಿಕೆಗಳಲ್ಲಿ ಒಟ್ಟುಮಾಡುವ ಪ್ರಯತ್ನ ಮಾಡಿದವರಲ್ಲಿ ಅವನೇ ಮೊದಲಿಗ. ಎಷ್ಟೋ ವಿಷಯಗಳ ಕುರಿತು ಆತನವೇ ಅಭಿಪ್ರಾಯವನ್ನು ದಾಖಲಿಸಿದ. ಅವನ ಅನಂತರ ಈ ಸಾಹಸಕ್ಕೆ ಕೈಹಾಕಿದಾತ ಮಾರ್ಕಸ್ ಟೆರೆನ್ಶಿಯಸ್ ವ್ಯಾರೋ ಎಂಬ (ಕ್ರಿ.ಪೂ. 116-27) ರೋಮನ್ ಬರೆಹಗಾರ. ಅವನು ಕಲೆ ಮತ್ತು ವಿಜ್ಞಾನಗಳ ಕುರಿತ ಒಂಬತ್ತು ಸಂಪುಟಗಳನ್ನು ಡಿಸಿಪ್ಲಿನೇ ಹೆಸರಲ್ಲಿ ಹೊರತಂದ. ಅರಿಸ್ಟಾಟಲ್ ಮತ್ತು ವ್ಯಾರೋ ವಿಶ್ವಕೋಶಗಳು ಇಂದು ಇಲ್ಲ. ತರುವಾಯದ ದಿನಗಳಲ್ಲಿ ಪ್ರಕಟವಾದ ಪುಸ್ತಕಗಳು ನೀಡಿದ ಆಧಾರದ ಮೇಲಷ್ಟೇ ಅವರಿಬ್ಬರ ಕೆಲಸಗಳ ಪರಿಚಯವಾದದ್ದು. ಪ್ಲಿನಿ (23-79) ಎಂಬ ರೋಮನ್ ವಿದ್ವಾಂಸನ ಹಿಸ್ಟಾರಿಕಾ ನ್ಯಾಮಿರಾಲಿಸ್ ಮಾತ್ರ ಇಂದು ಪ್ರಾಚೀನ ವಿಶ್ವಕೋಶ ಮಾದರಿಯಾಗಿ ಉಳಿದಿದೆ. ಇದು ಖನಿಜಗಳು, ಗಿಡಮೂಲಿಕೆಗಳು, ಪ್ರಾಣಿಪ್ರಪಂಚ ಇತ್ಯಾದಿಗಳ ಬಗ್ಗೆ ಸಾವಿರಾರು ಮಾಹಿತಿಗಳನ್ನು ಒದಗಿಸುತ್ತದೆ. ಚೀನದ ಮೊದಲ ವಿಷಯ ಮಾಹಿತಿ ಕೋಶ ಬಂದದ್ದು ಸು. 200ರಲ್ಲಿ. ಆದರೆ ಅದು ಲಭ್ಯವಿಲ್ಲ. ಅನಂತರ 800ರ ಸುಮಾರಿಗೆ ಬಂದ ಸಂಪುಟ ಚೀನದ ವಿಶ್ವಕೋಶಗಳಲ್ಲೆಲ್ಲ ಅತ್ಯಂತ ಮಹತ್ತ್ವಪೂರ್ಣವಾದದ್ದು ಎನಿಸಿದೆ. ಟುಯು ಎಂಬ ವಿದ್ವಾಂಸ ಸಂಪಾದಿಸಿದ ಈ ವಿಶ್ವಕೋಶ ವಿಷಯಗಳನ್ನು ವರ್ಗೀಕರಿಸಿ ಕ್ರಮಬದ್ಧವಾಗಿ ಜೋಡಿಸುವ ಕೆಲಸ ಮಾಡಿತು. ರಷ್ಯದ ಐಸಡೋರ್ ಎಂಬ ಬಿಷಪ್ 20 ಸಂಚಿಕೆಗಳಲ್ಲಿ ಹೊರತಂದ ಶಬ್ದನಿಷ್ಪತ್ತಿಕೋಶ ವಿಶ್ವಕೋಶಗಳ ಸಾಲಿನ ಮತ್ತೊಂದು ಸಾಧನೆ. ಪ್ರಪಂಚದ ಎಲ್ಲ ವಿದ್ವಾಂಸರೂ ಇದನ್ನು ಬಹಳ ಪ್ರಯೋಜನಕಾರಿಯೆಂದು ಮೆಚ್ಚುಗೆ ಸೂಚಿಸಿದ್ದಾರೆ. ಸುಮಾರು ಸಾವಿರ ವರ್ಷಗಳ ಹಿಂದಿನವರೆಗೂ ಈ ವಿಶ್ವಕೋಶ ನಿರ್ದಿಷ್ಟ ವಿಷಯ ಹಾಗೂ ಅದರ ಮೂಲಗಳ ಕುರಿತಂತೆ ಮಾಹಿತಿಯೊದಗಿಸುವ ಏಕಮೇವ ಸಂಗ್ರಹವಾಗಿ ಉಳಿದಿತ್ತು.

	ಬಾಗ್ದಾದ್‍ನ ವಿದ್ವಾಂಸ, ಭಾಷಾತಜ್ಞ ಇಬ್ನ್‍ಕುತ್ವಾಬಾ ಮೊತ್ತಮೊದಲ ಅರಾಬಿಕ್ ವಿಶ್ವಕೋಶವನ್ನು ಹೊರತಂದ. ಇದು ಪರ್ಷಿಯನ್ ವಿಶ್ವಕೋಶ ವಿಜ್ಞಾನದ ಬೀಗದಕೈಯಂತಿದೆ.  ಮುದ್ರಣ ಸೌಕರ್ಯ, ಕಾಗದದ ಶೀಘ್ರ ತಯಾರಿಕೆ ಮುಂತಾದವುಗಳಿಂದಾಗಿ 15ನೆಯ ಶತಮಾನದ ವೇಳೆಗೆ ವಿಶ್ವಕೋಶ ಪ್ರಕಟಣೆಯ ಕಾರ್ಯ ಸುಲಭವಾಗಲಾರಂಭಿಸಿತು. ಹಿಂದೆಂದಿಗಿಂತಲೂ ಶೀಘ್ರ ಹಾಗೂ ನಿಖರವಾಗಿ ಮಾಹಿತಿ ಸಂಚಯನ ಸಾಧ್ಯವಾದ ಬಳಿಕ 1481ರಲ್ಲಿ ವಿಲಿಯಮ್ ಕಾಕ್ಸ್‍ಟನ್ ಹೊರತಂದ ಮಿಕರ್ ಆಫ್ ದಿ ವಲ್ರ್ಡ್ ಎಂಬ ಫ್ರೆಂಚ್ ವಿಶ್ವಕೋಶದ ಅನುವಾದ ಇಂಗ್ಲಿಷ್‍ಭಾಷೆಯ ಮೂಲಾಧಾರ ಸಂಗ್ರಹವೆನಿಸಿತು.

	ಸು.1200-1600 ಅವಧಿಯಲ್ಲಿ ನಡೆದ ಮಾಹಿತಿಸಂಗ್ರಹಗಳೆಲ್ಲ ನಿಖರವಾಗಿ ಅಧ್ಯಯನವಸ್ತುಗಳನ್ನು ಪೂರೈಸಿದ್ದರೂ ಅವು ಬಹುತೇಕ ಇವರ ಗ್ರಂಥಗಳಿಂದ ಬಟ್ಟಿ ಇಳಿಸಿದವೇ. ಅದರಲ್ಲಿ ಪ್ರಕಟವಾದ ಏನ್ಸೆಂಟ್ ಬ್ಯೂಟಿಯಸ್‍ನ ಸ್ಪೆಕ್ಯುಲಂ ಮೈಯಸ್û (1244) ಎಂಬ ಮಾಹಿತಿಕೋಶ ಗಮನಾರ್ಹವಾದದ್ದು. ಅದನ್ನು ಅವನು ಮೂರು ಭಾಗಗಳಾಗಿ ವಿಂಗಡಿಸಿದ. ರಾಜಕೀಯ ಇತಿಹಾಸ, ಪ್ರಾಕೃತಿಕ ಇತಿಹಾಸ ಮತ್ತು ಶೈಕ್ಷಣಿಕ ವಿಷಯಗಳು ಎಂದು ವಿಭಾಗಿಸಲ್ಪಟ್ಟ ಈ ವಿಧಾನ ವಿಶ್ವಕೋಶ ರಚನೆಗೆ ಮತ್ತೊಂದು ನೂತನ ಕ್ರಮಬದ್ಧತೆಯನ್ನು ನೀಡಿತು. ದೊಡ್ಡಕನ್ನಡಿ ಎಂಬ ಅರ್ಥ ಬರುವ ಈ ವಿಶ್ವಕೋಶ ಎಲ್ಲ ಮಾನವಿಕ ವಿಷಯಗಳ ಜ್ಞಾನವನ್ನು ಪ್ರತಿಬಿಂಬಿಸಬೇಕು ಎಂಬುದು ಅವನ ಆಶಯ. ಇದೇ ರೀತಿ ಚೀನ, ಫ್ರಾನ್ಸ್ ಹಾಗೂ ಯುರೋಪಿನ ಇತರ ಭಾಗಗಳಲ್ಲಿ ವಿಶ್ವಕೋಶಗಳು ವಿವಿಧ ಜ್ಞಾನಶಾಖೆಗಳಲ್ಲಿ ಪ್ರಕಟಗೊಂಡುವು. 

	1700ರ ತರುವಾಯ ಈ ಕಾರ್ಯ ತ್ವರಿತಗತಿಯಲ್ಲಿ ಮುಂದುವರಿಯಿತು. ಅದರಲ್ಲಿ ಅತಿ ಪ್ರಮುಖವಾದವೆಂದರೆ-1704ರಲ್ಲಿ ಬಂದ ಜಾನ್ ಹ್ಯಾರಿಸ್ ಎಂಬ ಇಂಗ್ಲಿಷ್ ವಿದ್ಯಾಂಸನ ಲೆಕ್ಸಿಕನ್ ಟೆಕ್ನಿಕಮ್ ಎಂಬ ವಿಶ್ವಕೋಶ. ಇದು ಲೇಖನಗಳನ್ನು ಅಕಾರಾದಿಯಲ್ಲಿ ಸಂಯೋಜಿಸಿದ್ದಲ್ಲದೆ ನಿರ್ದಿಷ್ಟ ಲೇಖನಗಳನ್ನು ರಚಿಸಲು, ಸಂಬಂಧಿಸಿದ ತಜ್ಞರನ್ನು ಸಂಪರ್ಕಿಸಿ ಅನುಬಂಧಗಳನ್ನೂ ಆಧಾರಗ್ರಂಥಗಳ ಪಟ್ಟಿಯನ್ನೂ ಪ್ರಕಟಿಸಿತು. ಇಂಗ್ಲಿಷ್ ಭೂಪಟಕಾರನಾದ ಎಫ್ರಿಮ್ ಛೇಂಬರ್ ಎಂಬಾತನ ಯೂನಿವರ್ಸಲ್ ಡಿಕ್ಷನರಿ ಆಫ್ ಆಟ್ರ್ಸ್ ಅಂಡ್ ಸೈನ್ಸಸ್ ಕೋಶ (1728) ಈ ಹಾದಿಯ ಮತ್ತೊಂದು ಮೈಲುಗಲ್ಲು. ಹೆಚ್ಚಿನ ಮಾಹಿತಿ ಪಟ್ಟಿಯನ್ನು ವಿಸ್ತಾರ ವಿವರಗಳೊಂದಿಗೆ ಕೊಟ್ಟದ್ದು ಇದು ಮಾಡಿದ ಸಾಧನೆ. ಇದು ಮುಂದಿನ ಫ್ರೆಂಚ್ ವಿಶ್ವಕೋಶಗಳ ಮೇಲೆ ಅಗಾಧ ಪರಿಣಾಮ ಬೀರಿತು. 1751ರಲ್ಲಿ ಪ್ರಕಟವಾದ ಫ್ರೆಂಚ್ ವಿಶ್ವಕೋಶ 1751-72ರ ಅವಧಿಯಲ್ಲಿ 28 ಸಂಪುಟಗಳನ್ನು ಹೊರತಂದದ್ದಲ್ಲದೆ 1776ರಿಂದ 1780ರೊಳಗೆ ಮತ್ತೂ ಏಳು ಸಂಪುಟಗಳನ್ನು ಪ್ರಕಟಿಸಿತು. ಆ ಕಾಲದಲ್ಲಿ ಈ ವಿಶ್ವಕೋಶಗಳ ಸಂಪಾದಕರಾದ ಡೆನಿಸ್ ಡೀಡರೆ (1713-84), ಜೀನ್ ಡಿ ಆ್ಯಲಂಬರ್ಟ್ (1717-83) ಅವರನ್ನು ಫ್ರೆಂಚ್ ವಿದ್ವಾಂಸರು ವಿಶ್ವಕೋಶ ಕರ್ತೃಗಳೆಂದೇ ಗುರುತಿಸುವ ಮಟ್ಟಿಗೆ ಈ ಕೆಲಸ ವಿದ್ವದ್ವಲಯದಲ್ಲಿ ಪ್ರಭಾವಬೀರಿತು. ಈ ಸಾಧನೆ ಬ್ರಿಟಿಷ್ ವಿದ್ವಾಂಸರ ಗಮನ ಸೆಳೆದದ್ದೇ 1768ರಲ್ಲಿ ಎನ್‍ಸೈಕ್ಲೊಪೀಡಿಯ ಬ್ರಿಟಾನಿಕ ಪ್ರಕಟವಾಗಲು ಪ್ರೇರಣೆ. ಮೊದಲ ಸಂಪಾದನೆ 100 ಕಂತುಗಳಲ್ಲಿ ಮುಗಿಯಿತು. ಎರಡನೆಯದರಲ್ಲಿ ಆತ್ಮಚರಿತ್ರೆಗಳನ್ನು ಸೇರಿಸಿತು. 1768ರಿಂದ ಈ ತನಕ ಸತತವಾಗಿ ಪ್ರಕಟಗೊಂಡು ಪರಿಷ್ಕøತ ಆವೃತ್ತಿಗಳು ಹೊರಬರುತ್ತಿವೆ. ಹೀಗೆ ಪ್ರಪಂಚಾದ್ಯಂತ ವಿಶ್ವಕೋಶದ ಹಾದಿ ವಿಸ್ತಾರಗೊಂಡಿತು. ಇಂದು ಆನ್‍ಲೈನ್ ವಿದ್ಯುನ್ಮಾನ ವಿಶ್ವಕೋಶಗಳು, ಅದರಲ್ಲೂ 1990-2000ದ ಅವಧಿಯಲ್ಲಿ ದಿನೇದಿನೇ ತಮ್ಮ ಮಾಹಿತಿಪೂರಕ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇವೆ. ಆಲ್‍ಲೈನ್ ಶೋಧನೆ, ಗಣಕಯಂತ್ರದ ಸಹಾಯದಿಂದಲೇ ಆಗುವಂಥದು. ಬೇರೆಬೇರೆ ಕಡೆ ಹರಡಿಹೋಗಿರುವ ಮಾಹಿತಿಗಳನ್ನು ಹುಡುಕಿ ಒಂದೆಡೆ ಸಂಚಯಿಸಿಕೊಳ್ಳಲು ದೂರವಾಣಿ ಸಂಪರ್ಕ ಹಾಗೂ ಮೋಡೆಮ್ ಮತ್ತಿತರ ಸೌಕರ್ಯಗಳನ್ನು ಬಳಸಿಕೊಳ್ಳಬೇಕಾಗುತ್ತದೆ. ಎನ್‍ಸೈಕ್ಲೊಪೀಡಿಯ ಮೆಟ್ರೊಪಾಲಿಟಾನ, ಕಾಲಿಯರ್ಸ್ ಎನ್‍ಸೈಕ್ಲೊಪೀಡಿಯ, ಎನ್‍ಸೈಕ್ಲೊಪೀಡಿಯ ಯೂನಿವರ್ಸಲಿಸ್, ಎನ್‍ಸೈಕ್ಲೊಪೀಡಿಯ ಇಟಾಲಿಯನ್, ದಿ ನ್ಯೂ ಕಾಕ್ಸ್‍ಟನ್ ಎನ್‍ಸೈಕ್ಲೊಪೀಡಿಯ, ದಿ ವಲ್ರ್ಡ್ ಬುಕ್ ಎನ್‍ಸೈಕ್ಲೊಪೀಡಿಯ  ಎನ್‍ಸೈಕ್ಲೊಪೀಡಿಯ ಬ್ರಿಟಾನಿಕ, ಎನ್‍ಸೈಕ್ಲೊಪೀಡಿಯ ಅಮೆರಿಕಾನ, ಕಾಂಪ್ಟನ್ ಇಂಟರ್ಯಾಕ್ಟಿವ್ ಮೈಕ್ರೋಸಾಫ್ಟ್ ಎನ್‍ಕಾರ್ಟ್ ಇತ್ಯಾದಿಗಳು ಆನ್‍ಲೈನ್‍ಗಳಲ್ಲಿ, ಸಿಡಿ-ರಾಮ್‍ಗಳಲ್ಲಿ ಸಂಗ್ರಹಗೊಂಡು ದೊರೆಯುತ್ತಿವೆ. 			
(ಜಿ.ಎನ್.ಎಸ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	ಭಾರತೀಯ ಭಾಷೆಗಳಲ್ಲಿ ವಿಶ್ವಕೋಶಗಳು : ಭಾರತದಲ್ಲಿ ವಿಶ್ವಕೋಶ ಮಾದರಿಯ ಕೃತಿಗಳ ರಚನೆ ಹೆಚ್ಚಾಗಿ ಸಂಸ್ಕøತ ಸಾಹಿತ್ಯದಲ್ಲಿ ಕಂಡುಬರುತ್ತದೆ. ವರಾಹ ಮಿಹಿರನ (ಸು.6ನೆಯ ಶತಮಾನ) ಬೃಹತ್ಸಂಹಿತೆ ಈ ಮಾದರಿಯ ಒಂದು ಗ್ರಂಥ. ಗರುಡ, ಅಗ್ನಿ, ನಾರದ ಪುರಾಣಗಳನ್ನು (7-10ಶತಮಾನ) ವಾಙ್ಮಯ ವಿಶ್ವಕೋಶ ಎನ್ನಲಾಗಿದೆ. ಇವುಗಳಲ್ಲಿ ಪೌರಾಣಿಕ ವಿಷಯಗಳೊಡನೆ ವೈದ್ಯ, ವ್ಯಾಕರಣ, ನಾಟ್ಯ, ಸಂಗೀತ, ಜ್ಯೋತಿಶ್ಶಾಸ್ತ್ರ ಇತ್ಯಾದಿ ಅನೇಕ ವಿಷಯಗಳು ಪ್ರಸ್ತಾಪವಾಗಿವೆ. ಅಗ್ನಿಪುರಾಣ ಅಥವಾ ಆಗ್ನೇಯ ಪುರಾಣವನ್ನು (ನೋಡಿ- ಅಷ್ಟಾದಶಪುರಾಣಗಳು) ಸರ್ವವಿದ್ಯಾ ಸಂಗ್ರಹ ಎಂದು ಕರೆಯಲಾಗಿದೆ. ಇದಲ್ಲದೆ ಷಡ್ದರ್ಶನ ಸಮುಚ್ಚಯ ಎಂಬ ಆಯುರ್ವೇದ ಗ್ರಂಥ ಹಾಗೂ ಅನೇಕ ಬಗೆಯ ನಿಘಂಟುಗಳು ರಚನೆಗೊಂಡಿವೆ. ಮೂರನೆಯ ಸೋಮೇಶ್ವರನ (1127-39) ಮಾನಸೋಲ್ಲಾಸ ವಿಶ್ವಕೋಶದ ಲಕ್ಷಣವಿರುವ ಸಂಸ್ಕøತ ಗ್ರಂಥ. ಇದಕ್ಕೆ ಅಭಿಲಷಿತಾರ್ಥ ಚಿಂತಾಮಣಿ ಎಂಬ ಅಭಿದಾನವೂ ಇದೆ. ವೆಂಕಟಾಧ್ವರಿಯ (17ನೆಯ ಶತಮಾನ) ವಿಶ್ವಗುಣಾದರ್ಶಚಂಪೂ ಗಮನಾರ್ಹ ಸಂಸ್ಕøತ ಕೃತಿ. 

	ಭಾರತೀಯ ಭಾಷೆಗಳಲ್ಲಿ ಆಧುನಿಕ ಅರ್ಥದ ವಿಶ್ವಕೋಶ ರಚನೆ ನಡೆದದ್ದು 20ನೆಯ ಶತಮಾನದಲ್ಲಿ. ಈ ದಿಸೆಯಲ್ಲಿ ಬಂಗಾಲಿ ಭಾಷೆಯ 22 ಸಂಪುಟಗಳ ವಿಶ್ವಕೋಶವೇ ಅತ್ಯಂತ ಪ್ರಾಚೀನವಾದುದು(1902-11). ಅನಂತರ ಇದರ ಹಿಂದಿ ಆವೃತ್ತಿ 24 ಸಂಪುಟಗಳಲ್ಲಿ ಹೊರಬಂತು (1916-31). ಅನಂತರ ವಾರಾಣಸಿಯ ನಾಗರಿ ಪ್ರಚಾರಿಣೀ ಸಭಾ 12 ಸಂಪುಟಗಳಲ್ಲಿ ಹಿಂದಿ ವಿಶ್ವಕೋಶವನ್ನು ಪ್ರಕಟಿಸಿದೆ. ಸಾತಾರದ ತಾರಕತೀರ್ಥಲಕ್ಷ್ಮಣಶಾಸ್ತ್ರೀ ಜೋಶಿ ಮರಾಠಿ ವಿಶ್ವಕೋಶ ಮಹಾಮಂಡಲ್ ಎಂಬ ಸಂಸ್ಥೆ ಮರಾಠಿ ವಿಶ್ವಕೋಶದ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಮಹಾರಾಷ್ಟ್ರ ರಾಜ್ಯ ಮಂಡಳಿ ಇದೇ ಉದ್ದೇಶಕ್ಕಾಗಿ ಸರ್ಕಾರದ ಪರವಾಗಿ ಸ್ಥಾಪನೆಗೊಂಡಿದೆ. 

	ಬ್ರಿಟಾನಿಕ ವಿಶ್ವಕೋಶದ ಮಾದರಿಯಲ್ಲಿ ತೆಲುಗು ವಿಶ್ವಕೋಶವನ್ನು ಪ್ರಕಟಿಸುವ ಮೊದಲ ಪ್ರಯತ್ನ ಮಾಡಿದವರು(1913) ಕೊಮರ್ರಾಜು ವೆಂಕಟಲಕ್ಷ್ಮಣರಾವ್. ಇವರು ಮೊದಲು ಮೂರು ಸಂಪುಟಗಳನ್ನು ಪ್ರಕಟಿಸಿದರು (1915-17). 1947ರಲ್ಲಿ ಸ್ಥಾಪನೆಗೊಂಡ ತೆಲುಗು ಭಾಷಾ ಸಮಿತಿ ಈ ನಿಟ್ಟಿನಲ್ಲಿ ಗಣನೀಯ ಸೇವೆ ಸಲ್ಲಿಸಿ 16 ಸಂಪುಟಗಳ ತೆಲುಗು ವಿಜ್ಞಾನ ಸರ್ವಸ್ವಮು ಎಂಬ ವಿಷಯ ವಿಶ್ವಕೋಶ ಪ್ರಕಟಿಸಿದೆ. ಇದರಲ್ಲಿ ಚರಿತ್ರೆ-ರಾಜನೀತಿ, ಭೌತಶಾಸ್ತ್ರ-ರಾಸಾಯನಶಾಸ್ತ್ರ, ತೆಲುಗು ಸಂಸ್ಕøತಿ (2 ಸಂಪುಟ), ವಿಶ್ವಸಾಹಿತ್ಯ, ಸಮಾಜಶಾಸ್ತ್ರಗಳು, ಲಲಿತಕಲೆಗಳು, ವೈದ್ಯವಿಜ್ಞಾನ ಮುಂತಾದ 14 ಸಂಪುಟಗಳಿವೆ (1954-79). ಈಗ ಈ ಸಮಿತಿ ಹೈದರಾಬಾದಿನ ತೆಲುಗು ವಿಶ್ವವಿದ್ಯಾಲಯದ ಭಾಗವಾಗಿ ವಿಶ್ವಕೋಶ ಪರಿಷ್ಕರಣ ಕಾರ್ಯವನ್ನು ಕೈಗೊಂಡಿದೆ. ಸಂಗ್ರಹಾಂಧ್ರ ವಿಜ್ಞಾನ ಕೋಶ ಸಮಿತಿ ಸ್ಥಾಪನೆಗೊಂಡು(1953) 8 ಸಂಪುಟಗಳ ಸಾಮಾನ್ಯ ವಿಶ್ವಕೋಶ ಪ್ರಕಟಿಸಿದೆ (1958-71). 

	ಚೆನ್ನೈನ ತಮಿಳು ಅಭಿವೃದ್ಧಿ ಸಂಸ್ಥೆ 9 ಸಂಪುಟಗಳ ತಮಿಳು ವಿಶ್ವಕೋಶ ಹೊರತಂದಿದೆ (1954-63). ತಂಜಾವೂರಿನ ತಮಿಳು ವಿಶ್ವವಿದ್ಯಾಲಯ ತಮಿಳು ವಿಶ್ವಕೋಶ ವಿಭಾಗ ಸ್ಥಾಪಿಸಿ ವಿಷಯ ವಿಶ್ವಕೋಶಗಳನ್ನು ಪ್ರಕಟಿಸುತ್ತಿದೆ. 
	ಕೇರಳ ರಾಜ್ಯದ ಕೊಟ್ಟಾಯಮ್‍ನ ಸಾಹಿತ್ಯ ಪ್ರವರ್ತಕ ಕೋ-ಆಪರೇಟಿವ್ ಸೊಸೈಟಿ ವಿಶ್ವವಿಜ್ಞಾನಕೋಶಮ್ (10 ಸಂಪುಟ) ಎಂಬ ವಿಶ್ವಕೋಶ ಪ್ರಕಟಿಸಿತ್ತು(1970). ಅನಂತರ ಕೇರಳ ಸರ್ಕಾರ ವಿಶ್ವಕೋಶ ಯೋಜನೆಗೆಂದು ಇಲಾಖೆಯೊಂದನ್ನು ತೆರೆದು(1972) ಸರ್ವವಿಜ್ಞಾನ ಕೋಶಮ್ (20 ಸಂಪುಟ) ಪ್ರಕಟಿಸಿದೆ. 

	ಪಂಜಾಬಿ, ಗುಜರಾತಿ, ಒರಿಯ, ಅಸ್ಸಾಮಿ, ಕಾಶ್ಮೀರಿ ಹಾಗೂ ಇನ್ನಿತರ ಭಾರತೀಯ ಭಾಷೆಗಳಲ್ಲೂ ಬಾಂಗ್ಲಾ ದೇಶದಲ್ಲಿ ಬಂಗಾಲಿ ಭಾಷೆಯಲ್ಲಿ ವಿಶ್ವಕೋಶ ಪ್ರಕಟಿಸುವ ಸಿದ್ಧತೆ ನಡೆದಿದೆ. ವಿಶ್ವಕೋಶಗಳನ್ನು ಪ್ರಕಟಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.   

 (ಎಎಮ್‍ಡಿ.)

	ಕನ್ನಡದಲ್ಲಿ ವಿಶ್ವಕೋಶಗಳು: ಜ್ಞಾನದ ವಿವಿಧ ಶಾಖೆಗಳ ವ್ಯಾಪಕ ವಿವೇಚನೆಯನ್ನುಳ್ಳ ವಿಶ್ವಕೋಶಗಳ ರಚನೆ ಕರ್ನಾಟಕದಲ್ಲಿ ಹಿಂದಿನಿಂದ ಸಾಗಿ ಬಂದಿದೆ. ಪ್ರಬುದ್ಧ ಸಮಾಜಕ್ಕೆ ಅಗತ್ಯವೆನಿಸಿದ ಹಲವಾರು ಶಾಸ್ತ್ರಗಳ ಸಾರವನ್ನು ಒಂದೇ ಗ್ರಂಥವಾಗಿ ರಚಿಸುವ ಬಗೆಗಿನ ಇಂಥ ಪ್ರಯತ್ನ ಸು. 800 ವರ್ಷಗಳಿಂದ ಒಂದಾದ ಮೇಲೊಂದು ನಡೆದಿದೆ. ಈ ವಿಷಯದಲ್ಲಿ ಕಲ್ಯಾಣದ ಚಾಳುಕ್ಯ ಚಕ್ರವರ್ತಿ 3ನೆಯ ಸೋಮೇಶ್ವರ (1127-39) ಮಾನಸೋಲ್ಲಾಸ ಅಥವಾ ಅಭಿಲಷಿತಾರ್ಥಚಿಂತಾಮಣಿ, ಕೆಳದಿಯ ಒಂದನೆಯ ಬಸವಪ್ಪ ನಾಯಕನ (1697-1714) ಶಿವತತ್ತ್ವರತ್ನಾಕರ-ಇವು ಸಂಸ್ಕøತದಲ್ಲಿ ರಚಿತವಾದ ವಿಶ್ವಕೋಶದಂಥ ಗ್ರಂಥಗಳು.

	ನಿಜಗುಣಶಿವಯೋಗಿಯ ವಿವೇಕ ಚಿಂತಾಮಣಿ (ಸು. 1500) ಕನ್ನಡದ ಮೊತ್ತಮೊದಲ ಜ್ಞಾನಕೋಶ. ಈ ಗ್ರಂಥವನ್ನು ಸಾತಾರಾ ಜಿಲ್ಲೆಯ ಸಿಂಘಣಾಪುರದ ಕಾಂತೇಶ್ವರ ಎಂಬ ಕವಿ 16ನೆಯ ಶತಮಾನದಲ್ಲಿ ಮರಾಠಿಗೂ ತಮಿಳುನಾಡಿನಲ್ಲಿ 17ನೆಯ ಶತಮಾನದಲ್ಲಿ ಪ್ರಸಿದ್ಧನಾಗಿದ್ದ ಶಿವಪ್ರಕಾಶನೆಂಬ ಕವಿ ತಮಿಳು ಭಾಷೆಗೂ 18ನೆಯ ಶತಮಾನದಲ್ಲಿ ಮೈಸೂರು ಭಾಗದ ಹರಪುರದ ಲಿಂಗರಾಜ ಸಂಸ್ಕøತ ಭಾಷೆಗೂ ಭಾಷಾಂತರಿಸಿದರೆಂಬುದು ಈ ಗ್ರಂಥದ ಮಹತ್ತ್ವಕ್ಕೆ ನಿದರ್ಶನಗಳಾಗಿವೆ. ವೇದಪುರಾಣಶಾಸ್ತ್ರದೊಳ್ ನೇಮಿಸಿ ತೋರ್ಪ ವಿಶ್ವವಿಷಯಂಗಳ ಸಂಸ್ಥಿತಿಯಂ ವಿವೇಕಚಿಂತಾಮಣಿ ಎಂಬ ಪೆಸರಿಟ್ಟು ಪ್ರೇಮದಿ ಪೇಳ್ವೆಂ ಎಂಬುದಾಗಿ ಕವಿ ಗ್ರಂಥವನ್ನು ಪ್ರಾರಂಭಿಸಿದ್ದಾನೆ. ಈ ಗ್ರಂಥವನ್ನು 10 ಪರಿಚ್ಛೇದಗಳಾಗಿ ವಿಭಾಗಿಸಲಾಗಿದೆ. 535 ವಿವಿಧ ವಿಷಯಗಳನ್ನು ಕುರಿತು ಇಲ್ಲಿ ಹೇಳಲಾಗಿದೆ. ವೇದ, ವೇದಾಂಗ, ಉಪನಿಷತ್ತು, ಸ್ಮøತಿ, ಕರ್ಮ, ವರ್ಣಧರ್ಮ, ಗಣಿತ, ತೂಕ, ಪ್ರಮಾಣ, ಪುರಾಣ, ಇತಿಹಾಸ, ಚಾರ್ವಾಕ, ಬೌದ್ಧ, ಕೌಳಯಾಮಲ, ಶಾಕ್ತೇಯ, ಪಾಂಚರಾತ್ರ, ವೈದಿಕ-ಲೌಕಿಕ ಶಾಸ್ತ್ರಗಳು, ಮೀಮಾಂಸೆ, ವೈಶೇಷಿಕ, ಸಾಂಖ್ಯ, ಪಾತಂಜಲ, ಮೋಕ್ಷಪ್ರತಿಪಾದನೆ, ಸೂತ್ರ, ಭಾಷ್ಯ, ವ್ಯಾಖ್ಯಾನ, ಲಕ್ಷಣಗಳು-ಇತ್ಯಾದಿ ವಿಷಯಗಳಿಂದ ಈ ಗ್ರಂಥ ಮುಂದುವರಿದಿದೆ. ಆಗಮಭೇದ, ಆಗಮಸಂಖ್ಯೆ, ಆಗಮಸಾರ, ಶೈವ ಭೇದಗಳು; ವಿಭೂತಿ, ರುದ್ರಾಕ್ಷಿ, ಲಿಂಗ, ಮಂತ್ರ ಸಾಧನೆಗಳು; ಸೃಷ್ಟಿಸ್ವರೂಪ, ಅಷ್ಟದಿಗ್ಗಜಗಳು, ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ, ಭೂಕೈಲಾಸ, ಹೇಮಕೂಟ, ಸಿದ್ಧವಟ, ಭರತವರ್ಷ, ರಾಜಲಕ್ಷಣ, ಛಂದಸ್ಸು, ಅಲಂಕಾರ, ಮಹಾಕಾವ್ಯ, ಗಮಕಿ, ವಾದಿ, ವಾಗ್ಮಿ, ಪುಣ್ಯಕ್ಷೇತ್ರಗಳು, ಅಹೋರಾತ್ರಿಗಳ ಕಲ್ಪನೆಗಳು, ನಕ್ಷತ್ರಮಂಡಲ, ಮರಣಸೂಚನೆ, ಉತ್ತಮಲೋಕ ಪ್ರಾಪ್ತಿ, ಪಾಪಿಷ್ಠರಿಗೆ ದುರ್ಗತಿ, ಚತುರ್ಯುಗಗಳು, ಶಾಸ್ತ್ರ ಪ್ರಯೋಜನ-ಇತ್ಯಾದಿ ವಿಷಯಗಳನ್ನು ಕುರಿತು ಗ್ರಂಥಕಾರ ಹೃದಯಂಗಮವಾಗಿ ವಿವೇಚಿಸಿದ್ದಾನೆ. ನಿಜವಾಗಿಯೂ ಇದು ಕನ್ನಡದ ಒಂದು ಜ್ಞಾನ ಭಂಡಾರವೆಂದು ಹೇಳಬಹುದು. ಮೊತ್ತಮೊದಲು ಸಂಗೀತಶಾಸ್ತ್ರವನ್ನು ಕುರಿತು ವಿಸ್ತಾರವಾಗಿ ಹೇಳಿರುವುದು ಈ ಗ್ರಂಥದಲ್ಲಿ ಮಾತ್ರ ಎಂಬುದು ಇಲ್ಲಿ ಸ್ಮರಣಾರ್ಹವಾಗಿದೆ.

	ಇದಲ್ಲದೆ 2ನೆಯ ಚಾವುಂಡರಾಯನ ಲೋಕೋಪಕಾರ (ಸು. 1150), ಲಕ್ಕಣ್ಣದಂಡೇಶನ ಶಿವತತ್ತ್ವಚಿಂತಾಮಣಿ (ಸು. 1424), ಗುಬ್ಬಿಯ ಮಲ್ಲಣಾರ್ಯನ ವೀರಶೈವಾಮೃತ ಪುರಾಣ (ಸು. 1513), ಕಳಲೆ ವೀರರಾಜನ ಸಕಲವೈದ್ಯ ಸಂಹಿತಾಸಾರಾರ್ಣವ (ಸು. 1720) ಎಂಬ ಗ್ರಂಥಗಳು ವಿಶ್ವಕೋಶವನ್ನು ರಚಿಸುವವರಿಗೆ ಹೆಚ್ಚು ವಿಷಯಗಳನ್ನು ಒದಗಿಸಿಕೊಡುವ ಮಹತ್ತ್ವದ ಗ್ರಂಥಗಳಾಗಿವೆ.

	ಜ್ಞಾನ ಭಂಡಾರಗಳೆನಿಸಿದ ಇಂಥ ಗ್ರಂಥಗಳ ರಚನೆ ಈಚಿನ ವಿಶ್ವಕೋಶಗಳಿಗೆ ತಳಹದಿಯಾಯಿತೆನ್ನಬಹುದು. ಶಾಸ್ತ್ರೀಯ ವಿಶ್ವಕೋಶ ರಚನೆ ಪ್ರಾರಂಭವಾದುದು ಈಚೆಗೆ-ಇಪ್ಪತ್ತನೆಯ ಶತಮಾನದ ಎರಡು ಮೂರು ದಶಕಗಳು ಕಳೆದಮೇಲೆ.

	ಬಾಲ ಪ್ರಪಂಚ: ಶಿವರಾಮ ಕಾರಂತರಿಂದ ರಚಿತವಾದ ಮೂರು ಸಂಪುಟಗಳ ಮೊದಲ ವಿಶ್ವಕೋಶ (1931). ಸಚಿತ್ರವಾದ ಈ ಗ್ರಂಥ ಮಕ್ಕಳಿಗಾಗಿ ಸೃಷ್ಟಿಯಾದುದು. ಇಲ್ಲಿ ವಿಜ್ಞಾನ ವಿಷಯಗಳು ಬರುತ್ತವೆ. ನಡುನಡುವೆ ಕಥೆ, ಕವನ ಮುಂತಾದ ರಂಜಕ ವಿಷಯಗಳು ಬರುವುದರಿಂದ ಮಕ್ಕಳು ಆಸಕ್ತಿಯಿಂದ ಇವನ್ನು ಓದಲು ಅನುಕೂಲವೇರ್ಪಟ್ಟಿದೆ. ಇದು ಇಂಗ್ಲಿಷಿನಲ್ಲಿ ಆರ್ಥರ್ ಮೀ ಎಂಬಾತ ಮೊದಲು ಮಕ್ಕಳಿಗಾಗಿ ರಚಿಸಿದ ವಿಶ್ವಕೋಶದ ಮಾದರಿಯಲ್ಲಿದೆ.

	ವಿಜ್ಞಾನ ಪ್ರಪಂಚ: ಶಿವರಾಮ ಕಾರಂತರಿಂದ ನಾಲ್ಕು ಸಂಪುಟಗಳಲ್ಲಿ ರಚಿತವಾದ (1959-64) ವಿಜ್ಞಾನ ವಿಷಯ ವಿಶ್ವಕೋಶ. ಮೊದಲ ಭಾಗವಾದ ಈ ಜಗತ್ತು ಎಂಬುದರಲ್ಲಿ ಖಗೋಳ, ಭೂಗೋಳ, ಸಾಗರ, ವಾತಾವರಣ ಮುಂತಾದ ವಿಷಯಗಳೂ ಎರಡನೆಯ ಭಾಗವಾದ ಜೀವ, ಜೀವನದಲ್ಲಿ ಜೀವವಿಜ್ಞಾನ, ಸಸ್ಯ ವಿಜ್ಞಾನ, ಪ್ರಾಗ್‍ಜೀವ ವಿಜ್ಞಾನ, ಆರೋಗ್ಯ ಶಾಸ್ತ್ರ, ಮನೋವಿಜ್ಞಾನ, ಪ್ರಕೃತಿ ವಿಜ್ಞಾನಗಳೂ ಮೂರನೆಯ ಭಾಗವಾದ ವಸ್ತು ಚೈತನ್ಯದಲ್ಲಿ ವಿಜ್ಞಾನದ ಇತಿಹಾಸ, ಪರಮಾಣುಚರಿತ್ರೆ, ರಸಾಯನ ವಿಜ್ಞಾನ, ಭೌತವಿಜ್ಞಾನ, ಸಾಪೇಕ್ಷ ಸಿದ್ಧಾಂತ ಮೊದಲಾದ ವಿಷಯಗಳೂ ನಾಲ್ಕನೆಯ ಭಾಗವಾದ ವಿಜ್ಞಾನ ಸಾಧನದಲ್ಲಿ ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್, ಬದುಕಿನ ಸಮಸ್ಯೆಗಳು, ಸಾಹಸಗಳು, ವಿಜ್ಞಾನಿಗಳು-ಮುಂತಾದ ವಿಷಯಗಳು ಬಂದಿವೆ. ಪ್ರೌಢಶಾಲೆಯ ಕೊನೆಯ ಹಂತದಲ್ಲಿರುವ ವಿದ್ಯಾರ್ಥಿ ಶ್ರಮವಿಲ್ಲದೆ ನೇರವಾಗಿ ಕನ್ನಡದ ಮೂಲಕ ವಿಜ್ಞಾನ ವಿಷಯಗಳನ್ನು ತಿಳಿಯಲು ಈ ಗ್ರಂಥಗಳು ಉತ್ತಮ ಸಾಧನಗಳಾಗಿವೆ. ಪಾರಿಭಾಷಿಕ ಶಬ್ದಗಳನ್ನು ಆಯುವಲ್ಲಿ, ಶಾಸ್ತ್ರೀಯ ವಿಷಯವನ್ನು ಪ್ರತಿಪಾದಿಸುವಲ್ಲಿ ಉದ್ದಕ್ಕೂ ಲೇಖಕರು ತಮ್ಮ ಸಹಜ ಸರಳ ಮನೋಧರ್ಮವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ಉದಾಹರಣೆಗಳು ಕೇವಲ ವಿದೇಶೀಯವಾಗಿಲ್ಲ. ಬೇಕಾದಷ್ಟು ದೇಶೀ ನಿದರ್ಶನಗಳು ಬರುತ್ತವೆ. ಹತ್ತು ಕಡೆಯಿಂದ ಸಂಗ್ರಹಿಸಿದ ವಿಷಯಗಳನ್ನು ವಿಚಾರದ ಒರೆಗಲ್ಲಿನಲ್ಲಿ ಸಾಣೆ ಹಿಡಿದು ನಿರೂಪಿಸಲಾಗಿದೆ. ಈ ಸಂಪುಟಗಳಲ್ಲಿ ವಿಜ್ಞಾನದ ಸಮಗ್ರ ಆದರೂ ಸಂಕ್ಷೇಪ ನಿರೂಪಣೆಯನ್ನು ಕಾಣಬಹುದಾಗಿದೆ. ವಿಷಯಕ್ಕೆ ಒಪ್ಪುವ ಹಲವಾರು ಚಿತ್ರಗಳಿವೆ. ಇದೆಲ್ಲವೂ ಒಬ್ಬ ವ್ಯಕ್ತಿಯ ಸಾಧನೆ ಎಂಬ ವಿಷಯವನ್ನು ನೆನೆದಾಗ ಹತ್ತು ಮುಖಗಳ ಕಾರಂತರ ಬಗ್ಗೆ ಓದುಗರ ಮನಸ್ಸಿನಲ್ಲಿ ಕೃತಜ್ಞತೆ ಮೂಡುತ್ತದೆ.

	ಅನುವಾದಿತ ವಿಶ್ವಕೋಶ: ಕನ್ನಡ ವಿಶ್ವಕೋಶ ಚರಿತ್ರೆಯಲ್ಲಿ ಗಮನಾರ್ಹ ಒಂದು ಗ್ರಂಥ 1927ರಲ್ಲಿ ಪ್ರಕಟವಾಯಿತು. ಬೆಂಗಳೂರಿನ ಟ್ರ್ಯಾಕ್ ಅಂಡ್ ಬುಕ್ ಸೊಸೈಟಿಯವರು ಪ್ರಕಟಿಸಿರುವ ಈ ಎರಡು ಸಂಪುಟಗಳ ಹೆಸರು ಹೊಸ ಒಡಂಬಡಿಕೆಯ ವೇದಕೋಶ. ಇದರ  ಸಂಪಾದಕರು ಚಿಂತಾಮಣಿ ಕೇಲೆಬ್ ಮತ್ತು ಇ ಸ್ಟಾಂಲೆ ಎಡ್ವಡ್ರ್ಸ್. ಇದರಲ್ಲಿ ಕ್ರೈಸ್ತಧರ್ಮ, ಪುರಾಣ ಮತ್ತು ಆಚರಣೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಅಕಾರಾದಿಯಾಗಿ ಕೊಡಲಾಗಿದೆ. ತಮಿಳಿನಲ್ಲಿ ಇದು ಮೊದಲು ಅಚ್ಚಾಗಿದ್ದು ಅನಂತರ ಹೆಚ್ಚಿನ ವಿವರಗಳೊಂದಿಗೆ ಕನ್ನಡಕ್ಕೆ ಅನುವಾದಗೊಂಡಿದೆ. ಇವನ್ನು ಬಾಲ ಪಾಠಗಳು ಎನ್ನಲಾಗಿದೆ. ಅಂದರೆ ಕ್ರೈಸ್ತಧರ್ಮಾದಿಗಳನ್ನು ತಿಳಿಯಬಯಸುವವರಿಗೆ ಇದು ಪ್ರವೇಶವಿದ್ದಂತೆ. ಇಲ್ಲಿಯ ಲೇಖನಗಳು ಅಧಿಕೃತವಾಗಿವೆ. ಭಾಷೆ ಲಲಿತವಾಗಿದೆ. ಪ್ರತಿವಿಷಯಕ್ಕೂ ವಿಪುಲವಾಗಿ ಆಧಾರಗಳನ್ನು ಕೊಡಲಾಗಿದೆ. ಭಾಷಾದೃಷ್ಟಿಯಿಂದಲೂ ಈ ಗ್ರಂಥ ವಿಚಾರಯೋಗ್ಯವಾಗಿದೆ.

	ಕನ್ನಡ ವಿಶ್ವಕೋಶ: 14 ಸಂಪುಟಗಳ ಸಾಮಾನ್ಯ ವಿಶ್ವಕೋಶ. ಈ ಯೋಜನೆಯಂತೆ ಕನ್ನಡದಲ್ಲಿ ಇದುವರೆಗೆ ಹದಿಮೂರು ಸಂಪುಟಗಳು ಬಂದಿವೆ (1998). ಪ್ರಸ್ತುತ ಸಂಪುಟ ಈ ಯೋಜನೆಯ ಕೊನೆಯ ಸಂಪುಟ (2004). 1969 ನವೆಂಬರ್ 21ರಂದು ಮೊದಲ ಸಂಪುಟ ಬಿಡುಗಡೆಯಾಯಿತು. ಇದರ ಸಂಕ್ಷಿಪ್ತ ಚರಿತ್ರೆ ಮತ್ತು ವಿವರಗಳು ಹೀಗಿವೆ:

	1954ರಷ್ಟು ಹಿಂದೆಯೇ ಕೆ.ವಿ.ಪುಟ್ಟಪ್ಪನವರ ನೇತೃತ್ವದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಈ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸಿ ಮೈಸೂರು ಸರ್ಕಾರಕ್ಕೆ ಒಪ್ಪಿಸಿತು. ಈ ಯೋಜನೆಯ ಪೂರೈಕೆಗೆ ವಿದ್ಯಾಭ್ಯಾಸ ಇಲಾಖೆಯ ಅಂಗವಾಗಿ ಒಂದು ಪ್ರತ್ಯೇಕ ಭಾಗವನ್ನೆ ಸರ್ಕಾರ ತೆರೆಯಿತಾದರೂ ಈ ಕೆಲಸ ನಿಧಾನವಾಗಿ ನಡೆದಿತ್ತು. ಹತ್ತು ವರ್ಷ ಕಳೆದ ಮೇಲೂ ಪ್ರಥಮ ಸಂಪುಟ ಪ್ರಕಟಗೊಳ್ಳುವ ಚಿಹ್ನೆಗಳೇ ಇರಲಿಲ್ಲ. ಈ ಯೋಜನೆಯನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ವರ್ಗಾಯಿಸಲಾದದ್ದು 1968ರಲ್ಲಿ.

	ಅದೇ ವರ್ಷ ಮೇ ತಿಂಗಳಿನಲ್ಲಿ ದೇ.ಜವರೇಗೌಡರ ನೇತೃತ್ವದಲ್ಲಿ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ವಿಶ್ವಕೋಶದ ಕಾರ್ಯ ವ್ಯವಸ್ಥಿತವಾಗಿ ಆರಂಭವಾಯಿತು. ಮೊದಲ ಕೆಲವು ತಿಂಗಳುಗಳಲ್ಲಿ ಎದುರಾದ ವಿಘ್ನಗಳು ಅನೇಕ. ಕಾರ್ಯ ಕೈಗೊಳ್ಳಲು ಅಗತ್ಯವಾದ ಸೂಕ್ತ ಸಿಬ್ಬಂದಿಯ ಅಭಾವ, ವಿಷಯಗಳ ಮತ್ತು ಲೇಖಕರ ಆಯ್ಕೆ, ವಿಶ್ವಕೋಶದ ಸ್ವರೂಪ ನಿಷ್ಕರ್ಷೆ, ಚಿತ್ರರಚನೆ, ಲೇಖನಗಳ ಬೆರಳಚ್ಚು, ಮುದ್ರಣಕಾರ್ಯ ಇವು ಪರಿಹಾರವಾಗಬೇಕಾಗಿದ್ದ ಕೆಲವು ಸಮಸ್ಯೆಗಳು. ಒಟ್ಟಿನಲ್ಲಿ ವಿಶ್ವಕೋಶ ತನ್ನದೇ ಆದ ವಿಧಾನವೊಂದನ್ನು ರೂಪಿಸಿಕೊಳ್ಳುವುದು ಅವಶ್ಯವಾಗಿತ್ತು. ಆ ವರ್ಷ ಕಳೆಯುವುದರೊಳಗೆ ಕಾರ್ಯದ ಸಮಗ್ರ ಯೋಜನೆ ಸಿದ್ಧವಾಯಿತು. 1969 ಅಂತ್ಯವಾಗುವ ಮುನ್ನವೇ ವಿಶ್ವಕೋಶದ ಪ್ರಥಮ ಸಂಪುಟವನ್ನು ಜನತೆಯ ಕೈಯಲ್ಲಿಡಬಹುದೆಂಬ ಭರವಸೆ ಮೂಡಿದ್ದು ಆಗ.

	ಕನ್ನಡ ವಿಶ್ವಕೋಶದ ಮೊದಲ ಸಂಪುಟದ ಪ್ರಕಟಣೆ ಕನ್ನಡ ಭಾಷೆಯ ಇತಿಹಾಸದಲ್ಲೊಂದು ಮಹೋಜ್ಜ್ವಲ ಘಟನೆ. ಈ ಕೋಶ ಮತ್ತೊಂದು ವಿಚಾರವನ್ನೂ ಸ್ಪಷ್ಟಪಡಿಸಿದೆ. ವೈಜ್ಞಾನಿಕ, ಮಾನವಿಕ, ತಾಂತ್ರಿಕ ಯಾವುದೇ ವಿಷಯವನ್ನಾದರೂ ಕನ್ನಡದಲ್ಲಿ ಸರಳವಾಗಿ, ಸುಲಭವಾಗಿ ಹೃದಯವೇದ್ಯವಾಗುವಂತೆ ಹೇಳಬಹುದೆಂಬುದಕ್ಕೆ ಈ ಸಂಪುಟ ಸಾಕ್ಷೀಭೂತವಾಗಿದೆ. ಕನ್ನಡ ವಿಜ್ಞಾನ ಭಾಷೆಯಾಗಿ ಬೆಳೆದಿಲ್ಲವೆಂಬ ಸೊಲ್ಲು ಎಷ್ಟು ನಿರರ್ಥಕವಾದುದೆಂಬುದನ್ನು ಈ ಸಂಪುಟ ಪ್ರಮಾಣೀಕರಿಸುತ್ತದೆ ಎಂದು ಆಗ ಪ್ರಧಾನ ಸಂಪಾದಕರಾಗಿದ್ದ ದೇ. ಜವರೇಗೌಡ ಅವರು ಪೀಠಿಕೆಯಲ್ಲಿ ಬರೆದಿದ್ದಾರೆ.

	ಈ ಸಂಪುಟಗಳ ಮುಖ್ಯ ಲಕ್ಷಣಗಳಿವು: ಗ್ರಂಥದ ಆಕಾರ ಡೆಮಿ ಚತುರ್ಥಾಕಾರದ ಸು. 1000 ಪುಟ, 10 ಪಾಯಿಂಟ್ ಅಕ್ಷರದಲ್ಲಿ ಆಕರ್ಷಕ ಮುದ್ರಣ. ಕನ್ನಡ ವರ್ಣಮಾಲೆಯ ಅಕಾರದಿಂದಾರಂಭವಾಗಿ ಹಕಾರದ ವರೆಗೆ ವಿವಿಧ ವಿಷಯಗಳ ಮೇಲೆ ಲೇಖನಗಳು. ಅವಶ್ಯವಿದ್ದೆಡೆಯಲ್ಲೆಲ್ಲ ಚಿತ್ರ. ಇವುಗಳಲ್ಲಿ ಹಲವು ಹೊಳಪು ಕಾಗದದ ಮೇಲೆ ಅಚ್ಚಾಗಿರುವುದಲ್ಲದೆ ಕೆಲವು ವರ್ಣರಂಜಿತ, ಇಂಗ್ಲಿಷಿನ ಬ್ರಿಟಾನಿಕ ವಿಶ್ವಕೋಶದ ಮಾದರಿಯಲ್ಲಿ ಇದರ ವಿನ್ಯಾಸ.

	ಸಾಮಾನ್ಯ ವಿಶ್ವಕೋಶದಲ್ಲಿ ಈ ಶಾಸ್ತ್ರಗಳೆಲ್ಲ ಅಡಕವಾಗಿವೆ: ಸೌಂದರ್ಯ, ತತ್ತ್ವ, ಪಾಶ್ಚಾತ್ಯ, ಸಾಹಿತ್ಯ, ಪೌರಸ್ತ್ಯ ಸಾಹಿತ್ಯ, ಜಾನಪದ, ಕಲೆ, ಜೀವನ, ಅರ್ಥಶಾಸ್ತ್ರ, ತತ್ತ್ವ ಮತ್ತು ಧರ್ಮ, ಸಮಾಜ ವಿಜ್ಞಾನ, ಪ್ರಾಕ್ತನಶಾಸ್ತ್ರ, ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ, ವಾಣಿಜ್ಯ, ವ್ಯಾಪಾರ, ಶಿಕ್ಷಣ, ಸಮರ ವಿಜ್ಞಾನ, ನ್ಯಾಯಶಾಸ್ತ್ರ, ಮನೋವಿಜ್ಞಾನ, ಲಲಿತಕಲೆ, ಉಪಯುಕ್ತ ಕಲೆ, ಸಂಸ್ಕøತ ಭಾಷೆ ಸಾಹಿತ್ಯ, ಕನ್ನಡ ಭಾಷೆ ಸಾಹಿತ್ಯ, ಭಾಷಾ ವಿಜ್ಞಾನ, ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ಭೂವಿಜ್ಞಾನ, ವೈದ್ಯ, ಆಯುರ್ವೇದ, ಯುನಾನಿ, ಹೋಮಿಯೋಪತಿ, ಕೃಷಿ, ತೋಟಗಾರಿಕೆ, ಪಶುವೈದ್ಯ, ಶಿಲ್ಪ, ಕ್ರೀಡೆ, ಪತ್ರಿಕೋದ್ಯಮ, ಗ್ರಂಥಾಲಯ ವಿಜ್ಞಾನ, ಮುದ್ರಣ ವಿಜ್ಞಾನ ಸಂಖ್ಯಾಶಾಸ್ತ್ರ, ಅರಣ್ಯ ವಿಜ್ಞಾನ ಇತ್ಯಾದಿ.

	ಕನ್ನಡ ವಿಶ್ವಕೋಶ ಕಚೇರಿಯ ಕಾರ್ಯವಿಧಾನದ ಬಗ್ಗೆ ಕೆಲವು ಮಾತುಗಳನ್ನು ಇಲ್ಲಿ ಬರೆಯಬಹುದು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ವಿಶ್ವಕೋಶದ ಅಧಿಕಾರ ಪ್ರಯುಕ್ತ (ಎಕ್ಸ್-ಅಫಿಷಿಯೋ) ಪ್ರಧಾನ ಸಂಪಾದಕರು. ಈ ಕಾರ್ಯ ನಿರ್ವಹಣೆಯಲ್ಲಿ ಇವರಿಗೆ ನೆರವು ನೀಡುವವರು ನಾಲ್ವರು ಸಂಪಾದಕರು. ವಿಜ್ಞಾನಕ್ಕಾಗಿ ಒಬ್ಬರು, ಮಾನವಿಕ ವಿಭಾಗಕ್ಕೊಬ್ಬರು, ಇಡೀ ಸಂಪಾದನ ಕಾರ್ಯದ ಸಂಯೋಜನಕ್ಕಾಗಿ ಒಬ್ಬರು. ಯೋಜನೆಯ ಕಾರ್ಯನಿರ್ವಹಣೆಗಾಗಿ ಒಬ್ಬರು. ಸಹ ಸಂಪಾದಕರು ಒಬ್ಬರು, ಇವರ ಜೊತೆಗೆ ಮೂರು ಸಹಾಯಕ ಸಂಪಾದಕರು ಮತ್ತು ಐವರು ಉಪಸಂಪಾದಕರು. ವಿವಿಧ ಕ್ಷೇತ್ರಗಳಲ್ಲಿ ಲೇಖನಗಳನ್ನು ಬರೆಯುವ ಕಾರ್ಯವನ್ನು ಸಮರ್ಥ ವಿದ್ವಾಂಸರಿಗೆ ಒಪ್ಪಿಸಲಾಗುತ್ತದೆ. ಈ ಲೇಖನಗಳನ್ನು ಅವರು ಕನ್ನಡದಲ್ಲೇ ಬರೆಯಬೇಕೆಂಬ ಕಡ್ಡಾಯವೇನೂ ಇಲ್ಲ. ಅಧುನಾತನ ವಿಷಯಗಳನ್ನು ಸರಳ ಶೈಲಿಯಲ್ಲಿ ನಿಷ್ಕøಷ್ಟವಾಗಿ ನಿರೂಪಿಸಬೇಕೆಂಬುದು ವಿಶ್ವಕೋಶಗಳ ಮುಖ್ಯ ಉದ್ದೇಶ. ಹೀಗೆ ಸಿದ್ಧವಾದ ಲೇಖನಗಳನ್ನು ಸಂಪಾದಕರು ಪರಿಶೀಲಿಸುವರಲ್ಲದೆ ಸಂಬಂಧಪಟ್ಟ ಕೆಲವನ್ನು ಗೌರವ ಸಮಾಲೋಚಕರ ಅವಗಾಹನೆಗಾಗಿಯೂ ಕಳುಹಿಸಲಾಗುವುದು. ವಿಷಯದ ಹೂರಣ, ಅಭಿವ್ಯಕ್ತಿ, ಚಿತ್ರಗಳು, ಅವಶ್ಯವಾದ ಹಾಗೂ ಲಭ್ಯವಿರುವ ಹೊಸ ವಿಚಾರಗಳ ಅಡಕ, ಶೈಲಿ ಮತ್ತು ತಾಂತ್ರಿಕ ಶಬ್ದಗಳ ಏಕರೂಪತೆ, ಸೂಕ್ತ ಸ್ವರೂಪ ಇವು ಸಂಪಾದಕರು ಮುಖ್ಯವಾಗಿ ಗಮನಿಸುವ ವಿಚಾರ. ಲೇಖಕರಿಂದ ತರಿಸಿದ ಲೇಖನಗಳೇ ಅಲ್ಲದೆ ಹೊಸ ಲೇಖನಗಳನ್ನೂ ಸಂಪಾದಕ ವರ್ಗದವರು ಬರೆಯುತ್ತಾರೆ. ಸದಾ ಕಣ್ಣಿಟ್ಟು ವಿಷಯ ವೈವಿಧ್ಯವನ್ನೂ ಅದರ ವಿಭಿನ್ನ ಮುಖಗಳನ್ನೂ ಒದಗಿಸುವುದು ಸಂಪಾದಕ ವರ್ಗದ ವಿಶಿಷ್ಟ ಕಾರ್ಯಭಾಗ.

	ಹೀಗೆ ಶಾಸ್ತ್ರೀಯವಾಗಿ ವೈಜ್ಞಾನಿಕವಾಗಿ ಸಿದ್ಧವಾದ ವಿಶ್ವಕೋಶದ ಒಂದೊಂದು ಹೊಸ ಸಂಪುಟದ ಬಿಡುಗಡೆಯೊಂದಿಗೆ ಕನ್ನಡ ಭಾಷೆಗೆ ಒಂದೊಂದು ಹೊಸ ಆಯಾಮ ಲಭ್ಯವಾಗಿ ಭಾಷೆಗೆ ದೊರಕಿದ ಈ ಹೊಸ ಸತ್ತ್ವಸಂಪತ್ತಿಯಿಂದ ಕೋಶದ ಸಂಪುಟಗಳು ಮತ್ತಷ್ಟು ಶ್ರೀಮಂತಗೊಂಡಿವೆ.

	ಕನ್ನಡ ವಿಷಯ ವಿಶ್ವಕೋಶ: ಸಾಮಾನ್ಯ ವಿಶ್ವಕೋಶಗಳು ಗಳಿಸಿದ ಯಶಸ್ಸಿನ ದೃಷ್ಟಿಯಿಂದ ವಿಷಯ ವಿಶ್ವಕೋಶಗಳನ್ನು ಹೊರತರಲು ಬೃಹದ್ಯೋಜನೆಯೊಂದನ್ನು ತಯಾರಿಸಲಾಯಿತು. ಪ್ರಾಣಿಶಾಸ್ತ್ರ, ಗಣಿತವಿಜ್ಞಾನ, ವೈದ್ಯ ವಿಜ್ಞಾನ ಮುಂತಾದ 16 ವಿಜ್ಞಾನ ವಿಷಯಗಳು; ಕರ್ನಾಟಕ, ಇತಿಹಾಸ, ತತ್ತ್ವಶಾಸ್ತ್ರ, ಭಾಷಾವಿಜ್ಞಾನ ಮುಂತಾದ 14 ಮಾನವಿಕ ಶಾಸ್ತ್ರ ವಿಷಯಗಳು-ಹೀಗೆ ಒಟ್ಟು 30 ಸ್ವತಂತ್ರ ಸಂಪಟಗಳನ್ನು ಹೊರತರುವ ಯೋಜನೆ ಇದಾಗಿದೆ. ಇಡೀ ಯೋಜನೆಯ ವೆಚ್ಚ 90ಲಕ್ಷ ರೂಪಾಯಿಗಳು. ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದೆಯಲ್ಲದೆ ಈ ಹೊಣೆಯನ್ನೂ ಮೈಸೂರು ವಿಶ್ವವಿದ್ಯಾನಿಲಯಕ್ಕೇ ವಹಿಸಿಕೊಟ್ಟಿದೆ.

	ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಪ್ರಾರಂಭವಾದ ಈ ಕೆಲಸದಲ್ಲಿ ವಿಷಯ ವಿಶ್ವಕೋಶ ಯೋಜನೆಯ ಮೊದಲ ಸಂಪುಟವಾಗಿ ಕರ್ನಾಟಕ ವಿಷಯ ವಿಶ್ವಕೋಶ ಪ್ರಕಟಿಸಲಾಯಿತು (1979). ಸುದೀರ್ಘ ಇತಿಹಾಸದ ಶ್ರೀಮಂತ ಸಂಸ್ಕøತಿಯ ಬಹುಮುಖ ಪ್ರಗತಿಯ ಕರ್ನಾಟಕವನ್ನು ತಿಳಿಯಲು ಈ ವಿಶ್ವಕೋಶವೊಂದು ಅಧಿಕೃತ ಆಕರವಾಗಿದೆ. ಈ ವಿಶ್ವಕೋಶ ವಿಷಯದ ಆಯ್ಕೆ, ನಿರೂಪಣೆ ಮತ್ತು ತಾಂತ್ರಿಕತೆಯ ದೃಷ್ಟಿಯಿಂದ ಸಾಮಾನ್ಯವಿಶ್ವಕೋಶಕ್ಕಿಂತ ಭಿನ್ನವಾಗಿದೆ. 1790 ಲೇಖನಗಳನ್ನೊಳಗೊಂಡ ಈ ಹೆಬ್ಬೊತ್ತಿಗೆ ಕನ್ನಡ ಪ್ರಕಟಣದಲ್ಲಿ ಒಂದು ಮೈಲುಗಲ್ಲು. ಕರ್ನಾಟಕ ವಿಷಯ ವಿಶ್ವಕೋಶದ ಪ್ರತಿಗಳೆಲ್ಲ ಮಾರಾಟವಾಗಿ ಅದರ ಪುನರ್‍ಮುದ್ರಣ ಮತ್ತು ಪರಿಷ್ಕರಣೆಗೆ ಬೇಡಿಕೆ ಹೆಚ್ಚಿರುವುದನ್ನು ಮನಗಂಡ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಈ ಸಂಪುಟದ ಪರಿಷ್ಕಾರ ಹಾಗೂ ಪುನರ್ ಮುದ್ರಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಬೃಹತ್‍ಗಾತ್ರದ ಈ ಸಂಪುಟವನ್ನು ಎರಡು ಭಾಗಗಳಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದ್ದು ಕರ್ನಾಟಕ ವಿಷಯ ವಿಶ್ವಕೋಶದ ಮೊದಲ ಭಾಗ ಈಗ ಪ್ರಕಟವಾಗಿದೆ (2004).

	ಜ್ಞಾನಗಂಗೋತ್ರಿ: ಏಳು ಸಂಪುಟಗಳ ಕಿರಿಯರ ವಿಶ್ವಕೋಶ. ಕನ್ನಡ ವಿಶ್ವಕೋಶ ರಚನೆಯ ಹೊಣೆಯನ್ನು ಮೈಸೂರು ವಿಶ್ವವಿದ್ಯಾನಿಲಯ ವಹಿಸಿಕೊಂಡ ಸರಿಸುಮಾರಿನಲ್ಲೆ (1968) ಇದರ ಯೋಜನೆಯೂ ಆರಂಭವಾಯಿತು. ಬೆಂಗಳೂರಿನ ಕರ್ನಾಟಕ ಸಹಕಾರಿ ಪ್ರಕಾಶನದವರಿಗೆ ಈ ಯೋಜನೆಯನ್ನು ವಹಿಸಿಕೊಟ್ಟ ಸರ್ಕಾರ ಇದರ ಬಗ್ಗೆ 34 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿತ್ತು. ಜ್ಞಾನಗಂಗೋತ್ರಿಯ ಸಂಪಾದಕ ಮಂಡಳಿಗೆ ದೇಜಗೌ ಅಧ್ಯಕ್ಷರೂ ನಿರಂಜನರು ನಿಯಂತ್ರಕರೂ ಹಾಗೂ ಪ್ರಧಾನ ಸಂಪಾದಕರೂ ಆಗಿದ್ದರು. ಇವರಲ್ಲದೆ ಉಪಸಂಪಾದಕರೂ ವ್ಯವಸ್ಥಾಪಕ ಸಂಪಾದಕರೂ ಆಡಳಿತಾಧಿಕಾರಿಗಳೂ ಇದ್ದರು. ಮನುಕುಲದ ಕಥೆ; ಜೀವಜಗತ್ತು; ಭೌತಜಗತ್ತು; ಯಂತ್ರಜಗತ್ತು; ಕಲೆ, ಸಾಹಿತ್ಯ; ಕ್ರೀಡೆ, ಮನೋಲ್ಲಾಸ; ಭಾರತದ ಕಥೆ ಎಂಬ ಏಳು ಸಂಪುಟಗಳು ಪ್ರಕಟಗೊಂಡಿವೆ (1970-74). ಒಂದೊಂದು ಸಂಪುಟದ ಬೆಲೆ ಐವತ್ತು ರೂಪಾಯಿ. ಏಳೂ ಸಂಪುಟಗಳ ಒಟ್ಟು ಬೆಲೆ 350 ರೂಪಾಯಿ. ಮನುಕುಲದ ಕಥೆಯಲ್ಲಿ ನವಜೀವನದಿಂದ ಚಂದ್ರಯಾನದ ತನಕ, ನಾಗರಿಕತೆಗಳು, ಧರ್ಮಗಳು, ತತ್ತ್ವಜ್ಞಾನಿಗಳು, ರಾಜ್ಯಗಳ ಉದಯ, ರಾಜಕೀಯ ವ್ಯವಸ್ಥೆಗಳು, ವ್ಯಾಪಾರ, ವಾಣಿಜ್ಯ, ಕೈಗಾರಿಕೆ, ಭೂಗೋಳ, ಇತಿಹಾಸ ಪ್ರಸಿದ್ಧ ಸ್ತ್ರೀ ಪುರುಷರು-ಈ ವಿಷಯಗಳಿಗೆ ಸಂಬಂಧಪಟ್ಟಂತೆ ಲೇಖನಗಳಿವೆ. ಜೀವಜಗತ್ತಿನಲ್ಲಿ ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಶರೀರವಿಜ್ಞಾನ, ಮನೋವಿಜ್ಞಾನ, ವೈದ್ಯಕೀಯ, ಶಸ್ತ್ರಚಿಕಿತ್ಸೆ, ಕೃಷಿ, ಮತ್ಸ್ಯೋದ್ಯಮ, ತೋಟಗಾರಿಕೆ, ವಿಖ್ಯಾತ ಜೀವವಿಜ್ಞಾನಿಗಳು-ಇವುಗಳ ವಿಷಯ ನಿರೂಪಿತವಾಗಿದೆ. ಭೌತಜಗತ್ತಿನಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ, ಖಗೋಳ ವಿಜ್ಞಾನ, ಗಣಿತ, ಭೂವಿಜ್ಞಾನ, ಪವನ ವಿಜ್ಞಾನ, ವ್ಯೋಮಯಾನ, ಗ್ರಹಾಂತರ ಯಾನ, ಈ ಕ್ಷೇತ್ರದ ಪ್ರಸಿದ್ಧ ವಿಜ್ಞಾನಿಗಳು-ಮೊದಲಾದ ವಿಷಯಗಳಿವೆ. ಯಂತ್ರಜಗತ್ತು ಇದರಲ್ಲಿ ಎಂಜಿನಿಯರಿಂಗ್, ಮಿಲಿಟರಿ, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ತಾಂತ್ರಿಕತೆ, ಘನ, ಲಘು ಬೃಹತ್ ಪ್ರಮಾಣದ ಕೈಗಾರಿಕೋದ್ಯಮಗಳು, ದೂರ ಸಂಪರ್ಕಸಾಧನ, ಎಲೆಕ್ಟ್ರಾನಿಕ್, ಈ ಕ್ಷೇತ್ರಗಳ ಕೀರ್ತಿಶಾಲಿಗಳು-ಈ ವಿಷಯಗಳಿವೆ. ಕಲೆ ಸಾಹಿತ್ಯದಲ್ಲಿ ನೃತ್ಯ, ಸಂಗೀತ, ನಾಟಕ ಕಲೆ, ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಸಾಹಿತ್ಯ, ಆರಂಭದ ನಾಗರಿಕತೆಯಿಂದ ಆಧುನಿಕ ಅವಧಿಯತನಕ, ಭಾರತೀಯ ಮತ್ತು ಗ್ರೀಕ್ ಮಹಾಕಾವ್ಯಗಳು, ಕರ್ನಾಟಕದ, ಭಾರತದ, ವಿದೇಶಗಳ ಖ್ಯಾತ ಕಲಾವಿದರು, ಸಾಹಿತಿಗಳು ಈ ವಿಷಯಗಳು ತುಂಬ ಸೊಗಸಾಗಿ ಪ್ರತಿಪಾದಿತವಾಗಿವೆ. ಕ್ರೀಡೆ, ಮನೋಲ್ಲಾಸದಲ್ಲಿ ಜಗತ್ತಿನ ಕ್ರೀಡೆಗಳು, ಆಟಗಳು, ಶರೀರ ಶಿಕ್ಷಣ, ಪ್ರಸಿದ್ಧ ಕ್ರೀಡಾಪಟುಗಳು, ಒಲಿಂಪಿಕ್ ವೀರರು, ಹವ್ಯಾಸಗಳು, ಮನೋರಂಜನೆಯ ವಿಷಯಗಳು ಇವೆ. ಭಾರತದ ಕಥೆಯು ಚರಿತ್ರ ಪೂರ್ವ ಕಾಲಾವಧಿಯಿಂದ ಗಾಂಧೀ ಯುಗದ ತನಕ, ಪ್ರವಾಸಿಗರು ಕಂಡ ಭಾರತ, ಪ್ರಾಚೀನ ಭಾರತದಲ್ಲಿ ವಿಜ್ಞಾನ ಸಾಹಿತ್ಯ, ಪುರಾಣ ವ್ಯಕ್ತಿಗಳು, ಧರ್ಮೋಪದೇಶಕರು, ರಾಷ್ಟ್ರನಿರ್ಮಾಪಕರು, ಮಹಾನ್ ಆಡಳಿತಗಾರರು, ದಾಸ್ಯ-ಸ್ವಾತಂತ್ರ್ಯ, ಭಾರತದ ಭೂಗೋಳ, ಕೃಷಿ, ಕೈಗಾರಿಕೋದ್ಯಾಮ, ಭಾರತ ಮತ್ತು ವ್ಯೋಮಯುಗ, ವಿವಿಧತೆಯಲ್ಲಿ ಏಕತೆ-ಈ ಮೊದಲಾದ ವಿಷಯಗಳಿಂದ ತುಂಬಿದೆ. ಒಟ್ಟು ಏಳು    ಸಂಪುಟಗಳಲ್ಲಿ 17 ಲಕ್ಷ ಪದಗಳೂ 3,782 ಲೇಖನಗಳೂ 3,800 ರೇಖಚಿತ್ರಗಳೂ 3,750 ಛಾಯಾಚಿತ್ರಗಳೂ 291 ವರ್ಣಚಿತ್ರಗಳೂ ಸಂದರ್ಭಸೂಚಿಯ ಪದಗಳೂ ಇವೆ. ಈ ಸಂಪುಟಗಳನ್ನು ಸಿದ್ಧಪಡಿಸುವಾಗ ಕನ್ನಡ ನಾಡಿನ ಅನೇಕ ಪ್ರಸಿದ್ಧ ಲೇಖಕರಿಂದ ಮೂಲ ಸಾಹಿತ್ಯವನ್ನೂ ಸಿದ್ಧ ಲೇಖನಗಳನ್ನೂ ತರಿಸಿಕೊಳ್ಳಲಾಗಿದೆ. 11 ರಿಂದ 18 ವರ್ಷ ವಯಸ್ಸಿನವರನ್ನು ಉದ್ದೇಶದಲ್ಲಿಟ್ಟುಕೊಂಡು ಸಿದ್ಧಮಾಡಿದ ಈ ಗ್ರಂಥಗಳಲ್ಲಿ ವಿಷಯ ವೈವಿಧ್ಯ, ಅವುಗಳ ಆಯ್ಕೆ, ನಿರೂಪಣೆ, ವಿಶ್ಲೇಷಣೆ, ಸಂಯೋಜನೆ, ವಿವರಣೆ ಉತ್ಕøಷ್ಟತೆಯಿಂದ ಕೂಡಿದೆ. ಕನ್ನಡ ಜ್ಞಾನ ಸಾಹಿತ್ಯದ ಇತಿಹಾಸದಲ್ಲಿ ಜ್ಞಾನಗಂಗೋತ್ರಿಗೆ ಒಂದು ಗಣನೀಯ ಸ್ಥಾನ ದೊರಕುತ್ತದೆ ಎಂಬುದನ್ನು ಈ ಸಂಪುಟಗಳು ಸಿದ್ಧಪಡಿಸಿವೆ.

	ಕನ್ನಡ ಜಾನಪದ ವಿಶ್ವಕೋಶ: ಕನ್ನಡ ಸಾಹಿತ್ಯ ಪರಿಷತ್ತು ಹೆಸರಾಂತ ಜಾನಪದ ವಿದ್ವಾಂಸ ಚಂದ್ರಶೇಖರ ಕಂಬಾರ ಅವರ ಸಂಪಾದಕತ್ವದಲ್ಲಿ ಕನ್ನಡ ಜಾನಪದ ವಿಶ್ವಕೋಶವನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ (1985). ಕನ್ನಡ ನಾಡಿನ ನಂಬಿಕೆ, ಹಾಡು, ಸಂಪ್ರದಾಯ, ಕಥೆ, ಪುರಾಣ, ಗಾದೆ, ಬಯಲಾಟಗಳಂತಹ ಜನಪದ ಪ್ರಕಾರಗಳನ್ನು ಕುರಿತಂತೆ ಈ ಸಂಪುಟದಲ್ಲಿ ವಿಶ್ಲೇಷಿಸಲಾಗಿದೆ. ಜನಪದ ಆಚರಣೆಗಳು, ಆಟಗಳು, ಒಡಪುಗಳು, ಒಗಟುಗಳು, ಐತಿಹ್ಯಗಳು, ಶಕುನಗಳು, ಪ್ರಾಣಿಪಕ್ಷಿಗಳು, ಖನಿಜಗಳು, ಮಳೆ-ಗಾಳಿ, ನಕ್ಷತ್ರಗಳು, ಲಾವಣಿಗಳು, ಹಬ್ಬ-ಜಾತ್ರೆಗಳು, ಆಹಾರ ಸಂಪ್ರದಾಯಗಳು ವಿವಿಧ ಜನಸಮೂಹಗಳು, ಶವಸಂಸ್ಕಾರ ಪದ್ಧತಿಗಳು-ಈ ಮುಂತಾದ ಹತ್ತಾರು ವಿಷಯಗಳನ್ನು ಕುರಿತಂತೆ ಇದರಲ್ಲಿ ಲೇಖನಗಳಿವೆ. ಜಾನಪದ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ಸಾಮಾನ್ಯರನ್ನೂ ಗಮನದಲ್ಲಿಟ್ಟುಕೊಂಡು ಜಾನಪದಕ್ಕೆ ಸಂಬಂಧಪಟ್ಟ ಲೇಖನ, ಕಲ್ಪನೆಗಳನ್ನು, ಥಿಯರಿಗಳನ್ನು, ವಿದೇಶಗಳ ಜಾನಪದ ಸ್ವರೂಪವನ್ನು ಅವುಗಳ ಅಧ್ಯಯನ ಸಾಧನೆಗಳನ್ನು ಇಲ್ಲಿ ವಿಶದವಾಗಿ ನಿರೂಪಿಸಲಾಗಿದೆ.

	ಕನ್ನಡ ವಿಶ್ವವಿದ್ಯಾಲಯದ ವಿಶ್ವಕೋಶಗಳು: ಈ ವಿಶ್ವವಿದ್ಯಾಲಯ ವಿವಿಧ ವಿಶ್ವಕೋಶಗಳು ಎಂಬ ಹನ್ನೆರಡು ಸಂಪುಟಗಳ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಈಗಾಗಲೇ 8 ವಿಷಯಗಳಿಗೆ ಸಂಬಂಧಿಸಿದಂತೆ ಕೃತಿಗಳನ್ನು ಪ್ರಕಟಿಸಿದೆ. ವೈದ್ಯ, ಜನಪದ ಕಲೆ, ಸಮಾಜಕಾರ್ಯ, ಭಾಷೆ, ಧರ್ಮ, ಕರಕುಶಲ ಕಲೆ-ಈ ವಿಶ್ವಕೋಶಗಳು ವಿಷಯ ವೈವಿಧ್ಯದಿಂದ ಕೂಡಿದ್ದು ನಾಡಿನ ಹೆಸರಾಂತ ವಿದ್ವಾಂಸರು ಲೇಖನಗಳನ್ನು ಬರೆದಿದ್ದಾರೆ.

	ಕಿರಿಯರ ಕರ್ನಾಟಕ ವಿಶ್ವಕೋಶ: ಕನ್ನಡ ನಾಡು, ನುಡಿ ಮತ್ತು ಸಂಸ್ಕøತಿಯ ಸಂಪೂರ್ಣ ಚಿತ್ರಣವನ್ನು ಕನ್ನಡ ನಾಡಿನ ಕಿರಿಯರಿಗೆ ನೀಡುವ ಉದ್ದೇಶದಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಕಿರಿಯರ ಕರ್ನಾಟಕ ವಿಶ್ವಕೋಶವನ್ನು ಪ್ರಕಟಿಸಿದೆ. 12 ರಿಂದ 17 ವರ್ಷದ ವಯೋಮಾನದವರನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಸಚಿತ್ರ ಸಂಪುಟವನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಕರ್ನಾಟಕದ ಇತಿಹಾಸ, ಭಾಷೆ, ಸಾಹಿತ್ಯ, ಪತ್ರಿಕೋದ್ಯಮ, ಕೃಷಿ, ಕೈಗಾರಿಕೆ, ಉದ್ಯೋಗ, ಜಾನಪದ, ಶಿಕ್ಷಣ ಮೊದಲಾದ ವಿಷಯಗಳನ್ನು ಕುರಿತು ಸರಳ ನಿರೂಪಣೆ ಇದೆ.							
		*
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ